Saturday, 11 August 2018

ಇರಬೇಕು ಒಂದು ಇಂಥ ಓದಿನ ಕೋಣೆ

ಮನೆ ಎಂದರೆ ಉಳಿಯಲು ಬೇಕಾದ ನಾಲ್ಕು ಗೋಡೆಗಳಿಗೆ, ಮೇಲ್ಛಾವಣಿಗೆ ಮಾತ್ರ ಬೇಕಾದ ತಾಣವಲ್ಲ. ಮನೆ ಎಂದರೆ ವಾಸಿಸಲು ಬೇಕಾದ ನಿರ್ಮಲ ಸ್ಥಳ. ವಾಸದ ಮನೆ ವಿಶ್ರಾಂತಿಗೆ ಅನುಪಮವಾದ ಅವಕಾಶ ಒದಗಿಸಿ, ಸಂಜೀವಿನಿಯಂತೆ ಬದುಕನ್ನು ತಿರುತಿರುಗಿ ಸಶಕ್ತಗೊಳಿಸಿ ಪುನರುತ್ಥಾನಕ್ಕೆ ದಾರಿಯಾಗಿಸುವ ಉಲ್ಲಾಸದ ಸ್ಥಳ. ಹಾಗೆಯೇ ಬುದ್ಧಿ ಶಕ್ತಿ, ಚಾತುರ್ಯ, ಸಮಯ ಪ್ರಜ್ಞೆ, ವಿನಯ, ಸದ್ಬುದ್ಧಿಗಳೊಂದಿಗೆ ಸಂಪನ್ನ ಸಂಸ್ಕಾರವನ್ನ ಒದಗಿಸುವ ನೆಲೆಯೂ ಆಗಿದೆ. 

ಮಾನವನ ಧೀ ಶಕ್ತಿಗೆ ಉತ್ತಮವಾದೊಂದು ಅಡಿಪಾಯ ಕೂಡ ವಾಸದ ಮನೆಯಲ್ಲಿ ದೊರಕಬೇಕು. ಶಾಲೆ, ಕಾಲೇಜು, ಗುರು ಕುಲಗಳಲ್ಲಿ ಓದು, ಬರಹ, ಪಾಠ, ಬೋಧನೆಗಳೆಲ್ಲ ದೊರಕಿದರೂ ಮನೆ, ಚಿಂತನೆಗೆ, ಮಂಥನಕ್ಕೆ, ಅಂತೆಯೇ ಇತರ ಅನೇಕ ವಿಚಾರಗಳನ್ನು ತಿಳಿಯುವ ಓದಿಗೆ ಸೂಕ್ತ ಭೂಮಿಕೆಯನ್ನು ಕಟ್ಟಿಕೊಡುತ್ತದೆ. ಹೀಗಾಗಿ ನಿರಂತರ ಅಭ್ಯಾಸನಗಳಿಗೆ ಮನೆ ಫ‌ಲವಂತಿಕೆಯ ಬೀಡೇ ಆಗಿದೆ. ಪಶ್ಚಿಮ ದಿಕ್ಕಿನಲ್ಲಿ ಓದುವ ಕೋಣೆಯೊಂದು ಮನೆಯಲ್ಲಿರುವುದು ಒಳ್ಳೆಯ ವಿಚಾರವಾಗಿದೆ. ನೈಋತ್ಯ ಮೂಲೆಯಲ್ಲಿ ಓದಿನ ಕೋಣೆ ಬರಬಾರದು. ವಾಯವ್ಯದ ಮೂಲೆಗೂ ಓದಿನ ಕೋಣೆ ಇರಬಾರದು. ಓದಿನ ಸತ್ವ ಈ ದಿಕ್ಕುಗಳಲ್ಲಿ ನೂಕಲ್ಪಡುತ್ತದೆ. 

 ಪಶ್ಚಿಮ ದಿಕ್ಕಿನ ಓದಿನ ಕೋಣೆಯಲ್ಲಿ ಓದಿನ ಶಕ್ತಿಗೆ ಸಂಪನ್ನತೆ, ಆರೋಗ್ಯಕರ ಸಮತೋಲನ ದೊರಕಿ ಬೌದ್ಧಿಕ ಹಾಗೂ ಮಾನಸಿಕ ವಿಕಾಸಗಳಿಗೆ ಅವಕಾಶ ಒದಗಿಬರುತ್ತದೆ. ಈ ದಿಕ್ಕಿನಲ್ಲಿ ಬುಧ,ಗುರು, ಶುಕ್ರ ಹಾಗೂ ಚಂದ್ರ ಗ್ರಹಗಳ 
ಶುಭಕಾರಕವಾದ ಪ್ರೇರಕ ಶಕ್ತಿ ಕೂಡಿಬರುತ್ತದೆ. ಈ ಎಲ್ಲಾ ಗ್ರಹಗಳೂ ಶುಭ ಗ್ರಹಗಳ ಪಟ್ಟಿಯಲ್ಲಿ ಸಮಾವೇಶಗೊಳ್ಳುತ್ತವೆ. ಈ ಶುಭಕಾರಕವಾದ ಶಕ್ತಿಯೇ ಬೌದ್ಧಿಕ ವಿಕಸನಕ್ಕೆ ಹೆದ್ದಾರಿ ರೂಪಿಸುವ ಧಾತವಾಗಿದೆ. ಬುಧನಿಂದ ಮೇಧಾ ಶಕ್ತಿ, ಗುರುವಿನಿಂದ ಜ್ಞಾನ, ಚಂದ್ರನಿಂದ ಮಾನಸಿಕ ಸ್ಥೈರ್ಯ, ಶುಕ್ರನಿಂದ ಸಂಕಲ್ಪಿತ ಕಾರ್ಯದಲ್ಲಿ ಮುಂದಡಿ ಇಡುವ ಇಚ್ಛಾಶಕ್ತಿಗಳು ಚಿಮ್ಮುಕೊಳ್ಳುತ್ತಿರುತ್ತವೆ. ಪ್ರಾಣಿಗಳಿಗಿಂತ ಮನುಷ್ಯ ಹೀಗೆ ಭಿನ್ನನಾಗುತ್ತಾನೆ. 

 ಈ ಭಿನ್ನ ಸಂವಿಧಾನದಿಂದಾಗಿ ಪಾಶವೀ ಗುಣ, ಕ್ರೌರ್ಯಗಳು ಮೂಲೆ ಸೇರಿ ಸಾತ್ವಿಕ ಮಾರ್ಗಕ್ಕೆ ಬಾಗಿಲು ತೆರೆದು ಕೊಳ್ಳುತ್ತದೆ. ಹುರುಪು, ಮಹತ್ವಾಕಾಂಕ್ಷೆ, ಪೂರಕ ಪ್ರಯತ್ನಗಳಿಗೆ ಸಿದ್ಧಿಯೂ ಸಾಧ್ಯ. ಶುಕ್ರನ ಮತ್ತೂಂದು ದೊಡ್ಡ ಶಕ್ತಿ ಎಂದರೆ ಪ್ರತಿಭೆಗೆ ಉದ್ದೀಪನೆ ನೀಡುವ ವಿಫ‌ುಲ ಉತ್ಸಾಹವನ್ನ ನೈಸರ್ಗಿಕವಾಗಿ ಒದಗಿಸಿಕೊಡುವ ಪ್ರಚೋದಕ ಕ್ರಿಯೆ. ಹೀಗೆ ಓದಿನಿಂದ, ಮಾತು, ಪ್ರತಿಭೆಯ ವಿಕಸನ, ವಿನಯಗಳ ಸಿದ್ಧಿ ಸಾಧ್ಯ. ಈ ಸಿದ್ಧಿಯಿಂದ ಜೀವನಕ್ಕೆ ಬೇಕಾದ ದ್ರವ್ಯ ಸಂಪಾದನೆಗಳಿಗೆ ಸಾತ್ವಿಕ ಅವಕಾಶಕ್ಕೆ ದಾರಿ ಸಿಗುತ್ತದೆ. ಮನೆಯಲ್ಲಿ ನಮ್ಮ ಓದು ಪೂರ್ವದ ಕಡೆ ಅಥವಾ ಉತ್ತರದ ಕಡೆ ಮುಖ ಮಾಡಿಯೇ ಇರಬೇಕು. ಓದಿನ ಕೋಣೆಯ ಗೋಡೆಗಳ ಬಣ್ಣ ಆಕಾಶ ನೀಲಿ ಅಥವಾ ಕೆನೆ ಬಣ್ಣದಲ್ಲಿದ್ದರೆ ಒಳ್ಳೆಯದು. ಬಿಳಿ ಅಥವಾ ಹಸಿರು ಬಣ್ಣಗಳೂ ಕೂಡ ಅನುಪಮವೇ ಆಗಿವೆ.

ನೆಲದ ಹಾಸುಗಳೂ ಕೂಡ ಇವೇ ಬಣ್ಣವನ್ನು ಹೊಂದಿದ್ದಲ್ಲಿ ಉತ್ತಮ ಫ‌ಲ ಸಿಗಬಹುದಾಗಿದೆ. ಓದಿನ ಕೋಣೆಯ ಕಿಡಕಿಗಳು ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕುಗಳಿಗೆ ಇದ್ದಿರುವುದು ಸೂಕ್ತ.

 ಪುಸ್ತಕಗಳು ಜೋಡಿಸಲ್ಪಟ್ಟು, ಓರಣವಾಗಿ ಅಭ್ಯಾಸದ ಕೋಣೆ ಇರುವುದು ಮುಖ್ಯ. ಚಲ್ಲಾಪಿಲ್ಲಿಯಾಗಿ ಪುಸ್ತಕಗಳು ಹರಡಿ ಹಂಚಿಕೊಂಡು ಇರಬಾರದು. ಪುಸ್ತಕಗಳ ಕಪಾಟುಗಳು ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರುವುದು 
ಪ್ರಶಸ್ತವೆನಿಸುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಕೂಡಾ ಪುಸ್ತಕದ ಕಪಾಟುಗಳನ್ನು ಇಡಬಹುದಾಗಿದ್ದು, ಉತ್ತಮ ಓದಿಗೆ ಇದು ಸಹಾಯಕವೇ. 

No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...