Monday, 6 August 2018

ವಾಸ್ತು ಮನದ ಮೂಲೆಯ ಭಯಕ್ಕೆ ಕಾರಣವಾಗದಿರಲಿ

ಜಗತ್ತು ಬಹುವಿಧದಲ್ಲಿ ವೈವಿಧ್ಯಪೂರ್ಣತೆಯಿಂದ ತುಂಬಿದೆ. ಜೀವಜಂತುಗಳನ್ನು ಲಕ್ಷಗಟ್ಟಲೆ ಪ್ರಬೇಧಗಳನ್ನು ಹೊಂದಿದೆ. ಸ್ವಭಾವದಲ್ಲಿ ಒಂದು ಜೀವದ ವಿಧಾನ ಇನ್ನೊಂದಕ್ಕೆ ವಿರೋಧಿಯಾಗುತ್ತದೆ. ಗಂಡ ಹೆಂಡತಿಯರೇ ಆದರೂ ಹೊಂದಾಣಿಕೆಗೆ ಕಷ್ಟವಾಗುತ್ತದೆ. ನೀರಿಗಿಂತ ರಕ್ತ ಹೆಚ್ಚು ಸಾಂದ್ರತೆಯದ್ದಾದರೂ ತಂದೆ ಮಕ್ಕಳಿಗೇ ಹೊಂದಾಣಿಕೆ ಬರಲಾರದು. ಮನದೊಳಗೆ ಪ್ರೀತಿಯಿದ್ದರೂ ಹೊರಗೆ ಕಟುವಾಗಿ ವರ್ತಿಸುವ ಮಂದಿ. ಏನೋ ಅಹಂ ಒಂದು ಒಳಗೆ ಸುರಕ್ಷಿತ. ಹೇಳುವುದು ಆಚಾರ ತಿನ್ನುವುದು ಬದನೆಕಾಯಿ ಎಂಬ ಮಾತು ಪ್ರತಿದಿನ ನಮ್ಮ ಗಮನಕ್ಕೆ ಬರುತ್ತಿರುತ್ತದೆ.  ಬೇರೆಯವರು ತಿನ್ನುವ ಬದನೆಕಾಯಿ ಬಗ್ಗೆ ತಿಳಿಯುವ ಜಾಣತನ ನಮಗಿದೆ. ನಮ್ಮದನ್ನು ನಾವು ವೈಯುಕ್ತಿಕವಾಗಿ ಗಮನಿಸಲಾರೆವು. ಇದೊಂದು ಚೋದ್ಯ. ಹೀಗಾಗಿ ಆಹಾರ, ನಿದ್ರಾ, ಮೈಥುನಾದಿ ಅವಶ್ಯಕತೆಗಳ ಮೂಲಭೂತ ವಿಚಾರಗಳೊಂದಿಗೆ ಭಯವೂ, ಪ್ರಾಣಗಳನ್ನು ಮಾನವನೂ ಒಂದು ಪ್ರಾಣಿಯಾದ್ದರಿಂದ ಅದು ನಮ್ಮನ್ನು ಸುತ್ತಿಕೊಂಡಿತು.

 ಹೀಗಾಗಿ ಆಹಾರ ನಿದ್ರಾ ಭಯ ಮೈಥುನಗಳು ನಮಗೆ ಅನಿವಾರ್ಯ. ಆಹಾರಕ್ಕಾಗಿ ಶ್ರಮ ಬೇಕು. ಶ್ರಮದ ಕಾರಣದಿಂದ ನಿದ್ರೆ ಬೇಕು. ಜೀವ ಜಾಲರಿಯಲ್ಲಿ ಜೀವಗಳ ಕೋಟಿ ಕೋಟಿ ಮಿಸುಕಾಟಗಳು ಕಾಮದ ನೀಲಾಂಜನದ ಬತ್ತಿ ಉರಿಸಿ ಮೈಥುನವನ್ನು ಅನಿವಾರ್ಯವಾಗಿಸಿತು. ನಮ್ಮನ್ನು ನಾವು ಪುನರ್‌ ರೂಪಿಸಿಕೊಳ್ಳುವ ಸಂತಾನಾಭಿವೃದ್ಧಿ ಅತ್ಯಗತ್ಯವಾದ ವಿಷಯ. ಈ ಎಲ್ಲದರ ನಡುವೆ ಏನೋ ಭಯ ಆತಂಕ ಅಸುರಕ್ಷತೆ ಪಾಪಭೀತಿ ಬೆನ್ನು ಬಿಡದು.

 ಈ ಕಾರಣದಿಂದಲೇ ಮೆದುಳಿನ ಸರ್ವೋತ್ಕೃಷ್ಟ ಬೆಳವಣಿಗೆಗೆ ಅವಕಾಶ ಒದಗಿದ್ದು ನೆಲೆಗಟ್ಟಾಗಿ ಮಾನವ ಸಾಮಾಜಿಕ ಜೀವಿಯಾದ. ತನ್ನನ್ನು ತಾನು ಸುರಕ್ಷಿತವಾಗಿರಿಸಿಕೊಳ್ಳಲು ಮನೆ, ವಠಾರ, ಬೀದಿ, ಊರು, ರಾಜ್ಯ, ಮೋಹ, ಸ್ವಾರ್ಥ, ಅತಿಯಾದ ವಿಷಯಾಸಕ್ತಿ, ಹೊನ್ನು ಮಣ್ಣುಗಳಿಗಾಗಿನ ಅತಿಯಾದ ಆಕಾಂಕ್ಷೆ, ಹೆಣ್ಣು ಗಂಡಿಗೆ ಗಂಡು ಹೆಣ್ಣಿಗೆ ಮಾಯೆಯಾಗಿ ಒದಗಿ ಚಿಮ್ಮುವ ಭೋಗಕ್ಕಾಗಿನ ಲಾಲಸೆ ಇತ್ಯಾದಿ ಇತ್ಯಾದಿ ಮನುಷ್ಯ ಮನುಷ್ಯನಾಗಲು ಬಿಡಲಿಲ್ಲ. ಮನುಷ್ಯನಾಗದೆ ಬದುಕಿ ಬಾಳಲು ಸಾಧ್ಯವಾಗಲಿಲ್ಲ. 

 ಈ ಸಂದರ್ಭದಲ್ಲಿ ಮನುಷ್ಯನ ನೆರವಿಗೆ ಬಂದದ್ದು ಅವನೊಳಗಿನ ಪ್ರತಿಭೆ. ಮಾತು, ಸಂಗೀತ, ನೃತ್ಯ ಶಿಲ್ಪ ಸಂಗೀತ ಕಸೂತಿ ಕುಸುರೀ ಕಲೆ, ಉಡುಪು, ಒಡವೆ, ಸುಗಂಧ, ಹೂವು ಹಣ್ಣು , ಅಡುಗೆ ಇತ್ಯಾದಿ ಇತ್ಯಾದಿ. ಆದರೆ ಇವನ್ನೆಲ್ಲಾ ಪ್ರತಿಭೆಯ ಮೂಲಕ ಸಾಂಸ್ಕೃತಿಕ ಸಂವಿಧಾನಕ್ಕೆ ಒಳಪಡಿಸಿದ ಮನುಷ್ಯ ತನ್ನ ಸಂವಿಧಾನದಲ್ಲಿ ತಾನು ಬಂಧಿಯಾಗಿರಲೂ ಬಯಸದ ಮೃಗೀಯತೆಯನ್ನು ಬಿಡದಾದ. ಹೀಗಾಗಿ ಅಸಂತೋಷಗಳಿಗೆ ಕಾತರ ಕಿರಿಕಿರಿ ಮಾನಸಿಕ ವಿಹ್ವಲತೆಗಳಿಂದ ನರಳಲ್ಪಟ್ಟ. ಹಾಗಾದರೆ ಮನುಷ್ಯನ ಮೇಲೆ ಕೇವಲ ಅವನ ಇಚ್ಛಾಶಕ್ತಿ ಸ್ಥೈರ್ಯ, ಧೈರ್ಯಗಳು ಮಾತ್ರ ಇದ್ದರೆ ಎಲ್ಲವೂ ಸುಸೂತ್ರವೇ. ಇಲ್ಲ ಎಂಬುದು ಉತ್ತರವಾದಾಗ ಹಾಗಾದರೆ ಏನು ಎಂಬ ಪ್ರಶ್ನೆ ಎದುರಾಯ್ತು.

 ದೇವರು ಗ್ರಹಗಳ ಪ್ರಭಾವ, ವಾಸ್ತು ಪರಿಶುದ್ಧತೆ, ಸತ್ಯ, ನ್ಯಾಯ, ಧರ್ಮಗಳೆಂಬ ವೈಚಾರಿಕ ಮಂಥನ ಮನುಷ್ಯನಿಂದ ತನ್ನ ನೆಲೆ ಕಂಡುಕೊಳ್ಳಲು ಪ್ರಾರಂಭವಾಯ್ತು. ಆದರೆ ದೇವರುಗಳ ಬಗೆಗೆ, ಗ್ರಹಗಳ ಬಗೆಗೆ ಭಯ ಹುಟ್ಟಿಸುವ ಬುದ್ದಿವಂತರು ಧನದಾಹಕ್ಕೆ ತುತ್ತಾಗೆ ಕ್ರೂರಿಗಳಾದರು. ಇದರ ಅರ್ಥ ಎಲ್ಲರೂ ಎಂದಲ್ಲ. ಹೀಗಾಗಿ ಮನುಷ್ಯ ಮನುಷ್ಯನಾಗಬೇಕೇ ವಿನಃ ದೇವರೂ ಆಗಬಾರದು. ಮೃಗವೂ ಆಗಬಾರದು. ವಾಸ್ತು ಶಿಸ್ತು ಅಗತ್ಯ. ಅದಿರದಿದ್ದಲ್ಲಿ ಮನೆಯ ಪ್ರಸನ್ನತೆ ಏರುಪೇರಾಗುತ್ತದೆ. ಆದರೆ ನಿಧಾನವಾಗಿ ಸರಿಯಾಗಿ ತಿಳಿದವರಿಂದ ಒಂದೇಟಿಗೆ ಎಂಬಂತೆ ಅವಸರವನ್ನು ತೋರದೆ ವಾಸ್ತು ಶಿಸ್ತನ್ನು ರೂಢಿಸಿಕೊಳ್ಳಬೇಕು. ಇದನ್ನು ಬಿಟ್ಟು ಒಳ ಹೃದಯದಾಳದಲ್ಲಿ ಅವ್ಯಕ್ತ ಭಯ ಪಟ್ಟುಕೊಂಡು ಅಸ್ತವ್ಯಸ್ತವಾಗದಿರಿ. ನಿಮ್ಮ ಮನಸ್ಸು ದೃಢವಾಗಿರಲಿ. ಪ್ರತಿ ಹಂತಗಳನ್ನು ನಿಧಾನವಾಗಿ ದಾಟಿ ಒಳಿತುಗಳಿಗೆ ಭಯ ತೊರೆದು ದಾರಿ ಮಾಡಿಕೊಡಿ. 

No comments:

Post a Comment

ದೈನಂದಿನ ಜೀವನದಲ್ಲಿ ಅಮೂಲ್ಯ ವಾಸ್ತು ಟಿಪ್ಸ್

ವಯಸ್ಕರು ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಬೇಕು. ಆ ದಿಕ್ಕಿನಲ್ಲಿ ಮಲಗುವುದರಿಂದ ದೀರ್ಘಾಯುಷಿಯಾಗುತ್ತಾರೆ. ಮಕ್ಕಳು ಪೂರ್ವ ದಿಕ್ಕಿಗೆ ತಲೆಇಟ್ಟುಕೊಂಡು ಮಲಗುವುದರಿ...